ಕುಂಭೀಪಾಕ

  ಶಾಸ್ತ್ರೋಕ್ತವಾದ ಇಪ್ಪತ್ತೊಂದು ನರಕಗಳಲ್ಲಿದು ಹತ್ತೊಂಬತ್ತನೆಯದು. ಮನುವಿನ ಪ್ರಕಾರ ಇದಕ್ಕೆ ಸಂಪ್ರತಾಪನವೆಂದು ಹೆಸರು.

 ತಾವು ಮಾಡಿದ ಪಾಪ ನಿವಾರಣೆಗಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳದವರೂ ಪಶ್ಚಾತ್ತಾಪ ಪಡದವರೂ ದುಸ್ಸಹ ಭಯಂಕರ ನರಕಗಳನ್ನು ಹೊಂದುತ್ತಾರೆಂದು ಯಾಜ್ಞವಲ್ಕ್ಯನ ಅಭಿಪ್ರಾಯ.

 ಬ್ರಾಹ್ಮಣವಧೆ, ಮದ್ಯಪಾನ, ಕಳ್ಳತನ, ಗುರುದಾರಗಮನ-ಇವೇ ಮೊದಲಾದ ಮಹಾಪಾತಕಗಳನ್ನು ಮಾಡಿದವರು ಕುಂಭೀಪಾಕ ನರಕಭಾಜನರಾಗುತ್ತಾರೆ. ಪಾತಕಿಯನ್ನು ಮರಣಾನಂತರ ಸೆಳೆದೊಯ್ದು, ಆವಿಗೆಯಲ್ಲಿ ಕುಂಬಾರ ಮಡಕೆಯನ್ನು ಬೇಯಿಸುವಂತೆ, ಕಾಯ್ದ ಎಣ್ಣೆಯ ಗಡಿಗೆಯಲ್ಲಿ ಹಾಕಿ ಬೇಯಿಸುವುದೇ ಇಲ್ಲಿನ ಶಿಕ್ಷೆಯ ಕ್ರಮ.

 ಭಾಗವತದ ಪ್ರಕಾರ ಪಶುಪಕ್ಷಿಗಳ ಪ್ರಾಣಾಪಹರಣ ಮಾಡಿದವರಿಗೂ ಇದೇ ಶಿಕ್ಷೆಯಾಗುತ್ತದೆಂದಿದೆ.

 ಪಾದ್ಮಪುರಾಣದ ಪ್ರಕಾರ ವಾಚಾದತ್ತ, ಮನೋದತ್ತ, ಕುಶೋದಕ ಪೂರ್ವಕ ದತ್ತವಾದುದನ್ನು ಕೊಡದಿದ್ದಲ್ಲಿ ದಾನಮಾಡಿದವನ ನಾಲಗೆಯನ್ನು ಕಿತ್ತು ಕುಂಭೀಪಾಕ ನರಕದ ಶಿಕ್ಷೆಯನ್ನು ಕೊಡಲಾಗುತ್ತದೆ ಎಂದಿದೆ. 

 

 (ಎಸ್.ಎನ್.ಕೆ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ